ಮಂಜನಬೈಲು ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ. ಮಂಗಳೂರಿನಿಂದ ಪೂರ್ವಕ್ಕೆ ಸುಮಾರು 35 ಕಿ. ಮೀ. ದೂರದಲ್ಲಿರುವ ಜೈನಕಾಶಿ ಮುಡುಬಿದಿರೆಯಿಂದ ಪಶ್ಚಿಮಕ್ಕೆ 15 ಕಿ. ಮೀ. ಅಂತರದಲ್ಲಿರುವ ಕುಗ್ರಾಮ. ಬಡಗಮಿಜಾರು ಗ್ರಾಮ ವ್ಯಾಪ್ತಿಗೆ ಸೇರಿದ ಮಂಜನಬೈಲು ತೆಂಕಮಿಜಾರು ಗ್ರಾಮ ಪಂಚಾಯತಿಗೆ ಸೇರಿದೆ. ಈ ಹಿಂದೆ ಕಾರ್ಕಳ ತಾಲ್ಲೂಕಿನ ಭಾಗವಾಗಿದ್ದರೂ, ಉಡುಪಿ ಜಿಲ್ಲಾ ಪುನರ್ ವಿಂಗಡಣೆಯ ಬಳಿಕ ಮಂಗಳೂರು ತಾಲ್ಲೂಕಿಗೆ ಸೇರ್ಪಡೆಗೊಂಡಿದೆ.ಮಂಜನಬೈಲಿಗೆ ಹೋಗಬೇಕೇ? ಇಲ್ಲಿ ಕ್ಲಿಕ್ ಮಾಡಿ.

ಮಂಜನಬೈಲು ತಲುಪಲು ಅನೇಕ ದಾರಿ ಇವೆ. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರವಾದ ಮಂಗಳೂರಿನಿಂದ ಮುಡುಬಿದಿರೆಗೆ ಬಂದು, ಅಲ್ಲಿಂದ ಕಿನ್ನಿಗೋಳಿ ಕಡೆಗೆ ಬರುವ ಹಾದಿಯಲ್ಲಿ 12 ಕಿ. ಮೀ. ದೂರದ ಅರಿಯಾಳ ಸೇತುವೆಯಲ್ಲಿ ಇಳಿದು, ದಕ್ಷಿಣಕ್ಕೆ ಸುಮಾರು ಒಂದೂವರೆ ಕಿ. ಮೀ. ಕ್ರಮಿಸಿದರೆ ಮಂಜನಬೈಲು ತಲುಪಬಹುದು. ಗದ್ದೆ, ಗುಡ್ಡಬೆಟ್ಟಗಳ ನಡುವೆ ಹಾದುಬರುವುದೇ ಚೆಂದ. ಅರಿಯಾಳ ಸೇತುವೆಯಿಂದ ಅರ್ಧ ಕಿ. ಮೀ. ಮುಂದಕ್ಕೆ ಹೋಗಿ ನಿಡ್ಡೋಡಿ ಪೇಟೆಯಲ್ಲಿಳಿದರೆ, ಅಲ್ಲಿಂದ 5 ಕಿ. ಮೀ. ದೂರದ ಮಂಜನಬೈಲಿಗೆ ಹೋಗಬಹುದು. ರಿಕ್ಷಾ ಸೌಲಭ್ಯ ಇದೆ. ಗುಡ್ಡೆಯನ್ನು ಸೀಳಿ, ಹಾದುಹೋದ ಡಾಮಾರು ರಸ್ತೆಯಲ್ಲಿ ಸಾಗುವಾಗ ಕಾಣುವ ಪಶ್ಚಿಮದ ಅರಬ್ಬೀ ಸಮುದ್ರ, M. R. P.L. ರುದ್ರರಮಣೀಯ ನೋಟ, ಇದೀಗ ಆರಂಭವಾಗುತ್ತಿರುವ ನಾಗಾರ್ಜುನ ಪ್ರೊಜೆಕ್ಟಿನ ಹೊಗೆಸ್ಥೂಪವನ್ನೂ ಕಾಣಬಹುದು. ಕುಟ್ಟಿಕಳದಿಂದ ಸೂರ್ಯಾಸ್ತ ಚೆಂದ ಕಾಣುತ್ತದೆ.
ನಿಡ್ಡೋಡಿಯಿಂದ ಸುಣ್ಣದಗೂಡು ಬಳಿ ಗುಡ್ಡೆ ಹತ್ತಿ ಮಂಜನಬೈಲಿಗೆ ಬರಬಹುದು. ಉಡುಪಿಯಿಂದ ಮುಲ್ಕಿ- ಕಿನ್ನಿಗೋಳಿ- ನಿಡ್ಡೋಡಿಯಿಂದ, ಮಂಗಳೂರಿನಿಂದ ಮುಲ್ಕಿ, ಕಿನ್ನಿಗೋಳಿಗಾಗಿ ನಿಡ್ಡೋಡಿಗೆ ಬಂದು, ಮಂಗಳೂರು- ಸುರತ್ಕಲ್- ಹಳೆಯಂಗಡಿ- ಕಿನ್ನಿಗೋಳಿ- ನಿಡ್ಡೋಡಿಯಿಂದ, ಕಟೀಲು- ಮೂರುಕಾವೇರಿ- ನಿಡ್ಡೋಡಿಗೆ ಬಂದು, ಎಡಪದವು- ಮುಚ್ಚೂರು- ಬಂಗೇರಪದವು ಮುಖಾಂತರ ಮಂಜನಬೈಲು ತಲುಪಬಹುದು.
ಮಂಜನಬೈಲು ಸರ್ವಜನಾಂಗದ ಶಾಂತಿಯ ತೋಟ. ಕೃಷಿಕರು, ಕೂಲಿಕಾರ್ಮಿಕರು ಹೆಚ್ಚಾಗಿ ವಾಸಿಸುವ ಇಲ್ಲಿಯ ಮಂದಿಗೆ ಕೃಷಿಯೇ ಜೀವನಾಧಾರ. ಹಾಗಂತ ಇಲ್ಲಿನ ಒಂದಷ್ಟು ಮಂದಿ ಪರವೂರುಗಳಲ್ಲಿ, ವಿದೇಶಗಳಲ್ಲಿಯೂ ಇದ್ದಾರೆ. ಅಶ್ವತ್ಥಪುರ ದೇಶಸ್ಥ ಬ್ರಾಹ್ಮಣರು, ಕ್ರಿಶ್ಚಿಯನ್ನರು ಹಾಗೂ ಕುಡುಬಿಗಳು ಇಲ್ಲಿನ ನಿವಾಸಿಗಳು. ಅವರಲ್ಲಿ ಅನ್ಯೋನ್ಯತೆ ಇದೆ, ಸೌಹಾರ್ದತೆ ಮನೆಮಾಡಿದೆ. ತೀರಾ ಈಚೆಗೆ ಮಂಜನಬೈಲು ಪ್ರದೇಶಕ್ಕೆ ವಿದ್ಯುತ್ ಸಂಪರ್ಕ ಬಂದಿದೆ. ಕೆಲವರ ಮನೆಗಳಲ್ಲಿ ಸೋಲಾರ್ ದೀಪಗಳೂ ಇವೆ. ದೂರವಾಣಿ ಸೌಲಭ್ಯ ಒದಗಿದೆ. ಕೊಂಚ ಮಟ್ಟಿಗೆ ಅನುಕೂಲ ಎಂಬಂತೆ ರಸ್ತೆ ಸೌಕರ್ಯ ಆಗಿದೆ. ಇನ್ನಷ್ಟು ಪ್ರಗತಿ ಕಾಮಗಾರಿಗಳು ಆಗಬೇಕಿದೆ, ಅದಕ್ಕಾಗಿ ಪ್ರಯತ್ನ ಸಾಗಿದೆ. ಇಲ್ಲಿನವರು ದ್ವಿಚಕ್ರ, ತ್ರಿಚಕ್ರ ಹಾಗೂ ಚತುಷ್ಕಕ್ರ ವಾಹನಗಳನ್ನೂ ಹೊಂದಿದ್ದಾರೆ. ಇಲ್ಲಿನವರು ಮೊಬೈಲ್ ದೂರವಾಣಿಗಳನ್ನೂ ಹೊಂದಿದ್ದಾರೆ.

ಭತ್ತ ಇಲ್ಲಿನ ಪ್ರಮುಖ ಬೆಳೆ. ಜೊತೆಗೆ ಅಡಿಕೆ, ತೆಂಗು, ಬಾಳೆ ಬೆಳೆಯಲಾಗುತ್ತಿದೆ. ಮಂಜನಬೈಲು ವೀಳ್ಯದೆಲೆಗೆ ಪ್ರಸಿದ್ಧ. ಕಿನ್ನಿಗೋಳಿ ಮಾರುಕಟ್ಟೆಯಲ್ಲಿ ಮಂಜನಬೈಲು ವೀಳ್ಯದೆಲೆಗೆ ಭಾರೀ ಬೇಡಿಕೆ ಇದೆ. ಅದನ್ನು ಇಲ್ಲಿನ ಕ್ರಿಶ್ಚಿಯನ್ನರು ಬೆಳೆಯುತ್ತಾರೆ. ಅಲ್ಪ ಪ್ರಮಾಣದಲ್ಲಿ ಗೆಣಸು, ಶುಂಠಿ, ತರಕಾರಿಗಳನ್ನೂ ಬೆಳೆಯಲಾಗುತ್ತದೆ. ಹಲಸು ಮತ್ತು ಗೆಣಸಿನ ಹಪ್ಪಳ ಮಾಡಲಾಗುತ್ತದೆ. ಇಲ್ಲಿನ ಅನೇಕರು ಅದನ್ನು ಗೃಹೋದ್ಯಮವನ್ನಾಗಿ ಮಾಡಿಕೊಂಡಿದ್ದಾರೆ. ಅದು ಅವರ ಆದಾಯಕ್ಕೆ ಕೊಂಚ ಮಟ್ಟಿಗೆ ಸಹಕಾರಿ ಆಗುತ್ತದೆ. ಜೊತೆಗೆ ಮಾವು- ಹಲಸಿನ ಸಾಟ ಮಾಡಲಾಗುತ್ತಿದೆ. ಜೇನು ಸಂಗ್ರಹವೂ ಇದೆ. ಪಶುಸಂಗೋಪನೆ ಕೂಡಾ ಇಲ್ಲಿನವರ ಉಪವೃತ್ತಿ. ಕೋಳಿ, ಹಂದಿ, ಕೋಣ, ಎಮ್ಮೆ, ದನ-ಕರು, ಎತ್ತು, ಬೆಕ್ಕು, ನಾಯಿ ಸಾಕುತ್ತಾರೆ. ಕೆಲವರು ಆಡು ಕೂಡಾ ಸಾಕಿದ್ದರು. ಹೈನುಗಾರಿಕೆಯಲ್ಲೂ ಇಲ್ಲಿನವರದು ಅಳಿಲು ಸೇವೆಯ ಕೊಡುಗೆ ಇದೆ.

ನಿಡ್ಡೋಡಿ ತೆರೆಸಾಪುರ (ದಡ್ಡು) ತೆರೆಜಾ ಇಗರ್ಜಿ ಇಲ್ಲಿನ ಕ್ರಿಶ್ಚಿಯನ್ನರಿಗೆ ಶ್ರದ್ಧಾಕೇಂದ್ರ. ಕುಡುಬಿಗಳು ದೈಲಬೆಟ್ಟು ಶ್ರೀ ಮಹಾಲಿಂಗೇಶ್ವರ, ಪುತ್ತಿಗೆ ಸೋಮನಾಥ, ಮಿಜಾರು ಶ್ರೀ ವಿಷ್ಣುಮೂರ್ತಿ, ಕಾಯರ್ಮುಗೇರ್- ಕಾನ ಶ್ರೀರಾಮಮಂದಿರ, ಮುಡುಬಿದಿರೆ ಮಾರಿಗುಡಿಗಳನ್ನು ತಮ್ಮ ಶ್ರದ್ಧಾಕೇಂದ್ರಗಳನ್ನಾಗಿಸಿದ್ದಾರೆ. ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನಕ್ಕೆ ಗ್ರಾಮದೇವಸ್ಥಾನದ ಗೌರವ ನೀಡಿ, ತಮ್ಮ ಶ್ರದ್ಧೆ- ಭಕ್ತಿಗಳನ್ನು ತೋರ್ಪಡಿಸುತ್ತಾರೆ.
ಅಶ್ವತ್ಥಪುರ ದೇಶಸ್ಥ ಬ್ರಾಹ್ಮಣ ಸಮುದಾಯದವರಿಗೆ ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನವೇ ಪ್ರಮುಖ ಶ್ರದ್ಧಾಕೇಂದ್ರ. ಶೃಂಗೇರಿ ದಕ್ಷಿಣಾಮ್ನಾಯ ಶೃಂಗೇರಿ ಶಾರದಾಪೀಠ ಗುರುಪೀಠ. ಸದ್ಗುರು ಶ್ರೀ ಬ್ರಹ್ಮಚೈತನ್ಯ ಮಹಾರಾಜ್ ಗೋಂದಾವಲೇಕರ್ ಮತ್ತು ಬೆಳಧಡಿ ಶ್ರೀ ಗುರು ಬ್ರಹ್ಮಾನಂದರು ಆಧ್ಯಾತ್ಮಿಕ ಗುರುಗಳು.

ಮಂಜನಬೈಲು ದೇವರಮನೆ ಮಂಜನಬೈಲು ಕುಟುಂಬಸ್ಥರಿಗೆ ನಂಬುಗೆಯ ತಾಣ. ಶ್ರೀ ಭವಾನೀಶಂಕರ ಕುಲದೇವರು. ಮಂಜನಬೈಲಿನಿಂದ ಸುಮಾರು ಒಂದೂವರೆ ಕಿ. ಮೀ. ಪೂರ್ವಕ್ಕಿರುವ ಪಿದಮಲೆಯಲ್ಲಿರುವ ನಾಗಸನ್ನಿಧಿ ಸಮಸ್ತ ಕುಟುಂಬಿಕರ ನಾಗಬನ. ಅಲ್ಲಿಯೇ ಸಾನ್ನಿಧ್ಯ ವ್ಯಕ್ತಪಡಿಸಿರುವ ಧೂಮಾವತಿ ಮತ್ತು ಪಂಜುರ್ಲಿ ಕುಟುಂಬ ದೈವಗಳು. ಮಂಜನಬೈಲು ಓಳದ ಬದಿಯಲ್ಲಿ ನೆಲೆಯಾಗಿರುವ ಕಿರುದೈವ ಬೈಕಾಡ್ತಿಯನ್ನೂ ನಂಬಿನಡೆಯಲಾಗುತ್ತಿದೆ. ಮಂಜನಬೈಲು ಕುಟುಂಬಿಕರು ಕೌಶಿಕ ಗೋತ್ರೋತ್ಪನ್ನರು.
ಮಂಜನಬೈಲಿನಲ್ಲಿ ಜಲಸಲಿಲವೊಂದಿದೆ. ಅದರ ಹೆಸರು ಓಳ. ಮಳೆಗಾಲದಲ್ಲಿ ತುಂಬಿಹರಿಯುವ ಇದು, ರಮಣೀಯ ನೋಟ ಬೀರುತ್ತದೆ. ಇಲ್ಲಿನ ತೋಟ, ಗದ್ದೆಗಳಿಗೆ ಇದು ನೀರಿನ ಸೆಲೆಯೂ ಹೌದು. ಸದ್ಯವೇ ಇದಕ್ಕೊಂದು ಸೇತುವೆ ಆಗಲಿದೆ.